Education
ಡ್ರೈವರ್ ಮಾವನಿಗೊಂದು ಥ್ಯಾಂಕ್ಯೂ...”
- Get link
- X
- Other Apps
ಡ್ರೈವರ್ ಮಾವನಿಗೊಂದು ಥ್ಯಾಂಕ್ಯೂ...”
ರಜೆ ಬಂತೆಂದರೆ ಸಾಕು, ಮನೆಗೆ ಓಡುವ ಸಂಭ್ರಮ. ಅದರಲ್ಲೂ ಹಾಸ್ಟೆಲ್ ವಿದ್ಯಾರ್ಥಿಗಳಿಗಂತೂ ಕೂಡಿ ಹಾಕಿದ ಗಿಣಿಗೆ ಪಂಜರದಿಂದ, ಸ್ವಚ್ಛಂದ ಪರಿಸರಕ್ಕೆ ಹಾರಿಸಿ ಬಿಟ್ಟಂತಾಗುತ್ತದೆ. ನಿಯೋಜಿತ ಕಾರ್ಯ, ಪ್ರಾಯೋಗಿಕ ತರಬೇತಿ ಎಂಬ ಜಂಜಾಟಗಳಿಂದ ಮುಕ್ತಿ ಪಡೆದು, ಅನೇಕ ದಿನಗಳ ನಂತರ ಊರಿಗೆ ಹೊರಟ ನನಗೂ ಕೂಡ ಅದೇ ಅನುಭವ ಆಗಿತ್ತು. ನನ್ನ ಮನೆ ಅರಮನೆ ಅಲ್ಲದಿದ್ದರೇನಂತೆ, ನನ್ನೂರಿನ ಸೌಂದರ್ಯವನ್ನು ಬಣ್ಣಿಸಲು ಮತ್ತೆ ಕುವೆಂಪುರಂತಹ ಕವಿಗಳೆ ಬರಬೇಕು. ನಾಲ್ಕು ಸುತ್ತಗಳಿಂದಲೂ ಬೆಟ್ಟ- ಗುಡ್ಡಗಳಿಂದ ಕೂಡಿದ, ಹಸಿರು ಪಲ್ಲಂಗವನ್ನೇ ಹಾಸಿ ಹೊದ್ದಿರುವ ಪರಿಸರ. ಅನೇಕ ರೀತಿಯ ಮರಗಳು, ನಡು ನಡುವೆ ಸಣ್ಣಗೆ ಝೇಂಕರಿಸಿ ಹರಿಯುವ ಹಳ್ಳಗಳು, ವಿವಿಧ ರೀತಿಯ ಕಾಡು ಪ್ರಾಣಿಗಳೂ, ಪಕ್ಷಿಗಳು ಹೀಗೆ ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡುವ, ಪರಿಸರ ಪ್ರೇಮಿಗಳನ್ನು ಕೈಬೀಸಿ ಕರೆಯುವ ಸುಂದರ ಊರು ನನ್ನದು.
ನಾನು ಉಜಿರೆಯಿಂದ ನನ್ನೂರಿಗೆ ಸಾಗಬೇಕಾದರೆ ಗೊಂಡಾರಣ್ಯಗಳಿಂದ ಕೂಡಿದ, ಕುದುರೆ ಮುಖ ರಾಷ್ಟ್ರೀಯ ಉದ್ಯಾನವನವನ್ನೂ ದಾಟಿ ಶೃಂಗೇರಿಯ ಶಾರದಾಂಬೆಯ ದರ್ಶನ ಪಡೆದು ಮುಂದೆ ಸಾಗಬೇಕು. ಕಿರಿದಾದ ರಸ್ತೆಗಳಿಂದ ಕೂಡಿದ, ತನ್ನ ಒಂದು ಮಗ್ಗುಲಿನಲ್ಲಿ ತುಂಗಾಹೊಳೆಯನ್ನು ಪೋಷಿಸಿಕೊಂಡು, ಇನ್ನೊಂದು ಮಗ್ಗುಲಿನಲ್ಲಿ ಅಭಯಾರಣ್ಯವನ್ನು ಬೆಳೆಸಿಕೊಂಡು ಪರಿಸರ ಪ್ರಿಯರಿಗೆ ಪ್ರಯಾಣದ ಆಯಾಸವೇ ಅರಿಯದಂತೆ ಕರೆದುಕೊಂಡು ಹೋಗುವ ರಸ್ತೆ ಅದು. ಅದು ರಾಷ್ಟ್ರೀಯ ಉದ್ಯಾನವನವಾಗುರುವುದಕ್ಕೂ ಒಂದು ರೀತಿಯ ಸಾರ್ಥಕತೆ ಇದೆ. ಅನೇಕ ಔಷಧಿ ಸಸ್ಯಗಳಿಂದ ಕೂಡಿದ, ಅದೇಷ್ಟೋ ಕಾಡು ಪ್ರಾಣಿ ಪಕ್ಷಿಗಳಿಗೆ ಆಸರೆಯಾಗಿರುವ, ಅಳಿವಿನಂಚಿನಲ್ಲಿರುವ ಅದೇಷ್ಟೋ ಜೀವಿಗಳಿಗೆ ಜೀವಕಳೆ ತುಂಬಿ ಮರುಜನ್ಮಕ್ಕೆ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ನಾವು ರಸ್ತೆಯಲ್ಲಿ ಸಾಗುವಾಗ ಅಲ್ಲಲ್ಲಿ ಕಂಡುಬರುವ ಸೂಚನಾ ಫಲಕ, ಅದರಲ್ಲೂ ಜಾಗೃತ ಸೂಚನಾ ಫಲಕ, ವಿದ್ಯಾವಂತರನ್ನು, ಪ್ರಾಣಿ ರಕ್ಷಕರನ್ನು ಗಮನ ಸೆಳೆಯುತ್ತದೆ. ತಣ್ಣಗೆ ಬೀಸುತ್ತಿದ್ದ ಗಾಳಿಗೆ ನಿದ್ರಾದೇವಿ ನನ್ನೊಳಗೆ ಪ್ರವೇಶ ಮಾಡತೊಡಗಿದ್ದಳು. ದೂರದಲ್ಲಿ ಕಂಡ ಸೂಚನಾಫಲಕದ ಮೇಲೆ ಅದೇನೋ ಬರೆದಂತೆ ಮಂಜು ಮಂಜಾಗಿ ತೋರುತ್ತಿತ್ತು. ಕಣ್ಣನುಜ್ಜಿಕೊಳ್ಳುವಾಗಾಗಲೆ, ಸೂಚನ ಫಲಕದಲ್ಲಿ ಇದ್ದ ಪದಗಳು ನನ್ನ ಗಮನ ಸೆಳೆದವು. “ ಚಾಲಕರ ಗಮನಕ್ಕೆ, ಪ್ರಾಣಿಗಳು ರಸ್ತೆ ದಾಟುತ್ತಿರುತ್ತವೆ, ವಾಹನ ಚಲಾಯಿಸುವಾಗ ಎಚ್ಚರದಿಂದಿರಿ” ಎಂದು ಬರೆಯಲಾಗಿತ್ತು. ನಾನೊಬ್ಬನೇ ಬದುಕ ಬೇಕು, ನಾನೊಬ್ಬ ಚೆನ್ನಗಿದ್ದರೆ ಸಾಕು, ನನ್ನನ್ನು ಬಿಟ್ಟರೆ ಈ ಭೂಮಿಯ ಮೇಲೆ ಯಾರೂ ಇರಲೇಬಾರದೆನ್ನುವ ವ್ಯವಹಾರಿಕ ಪ್ರಪಂಚದೊಳಗೆ, ಮೂಕ ಪ್ರಾಣಿಗಳ ಮೇಲೆ ದಯೆ ತೋರುವ ಮೂಲಕ ಅವುಗಳಿಗೆ ಬದುಕುವ ಹಕ್ಕನ್ನು ಕಲ್ಪಿಸಿಕೊಟ್ಟಿರುವ ಅರಣ್ಯ ಇಲಾಖೆಯ ಸೇವೆ ಮೆಚ್ಚುವಂತದ್ದು.
ಖುಷಿ ಹಿಂದೆಯೆ ದುಃಖ ಇದೆ, ಸುಖದ ಹಿಂದೆಯೆ ಕಷ್ಟ ಇದೆ, ಎನ್ನುವ ವಿಚಾರಕ್ಕೂ ಈ ಪ್ರಯಾಣದ ಅನುಭವಕ್ಕೂ, ಒಂದು ರೀತಿಯ ಸಂಬಂಧವಿದೆ. ಅಭಯಾರಣ್ಯದ ನಡುವೆ ಸಾಗುವ ರಾಷ್ಟ್ರೀಯ ಹೆದ್ದಾರಿ ಬಹಳ ಕಿರಿದಾಗಿದ್ದು, ಜನರನ್ನು ಹೊತ್ತೊಯ್ಯುವ ಬಸ್ಗಳು, ರಜೆಯ ಮಜೆಯಲ್ಲಿ ನುಗ್ಗಿ ಬರುವ ಪ್ರವಾಸಿಗರ ವಾಹನಗಳು, ಬೆಟ್ಟವನ್ನೆ ಹೊತ್ತು ಬರುತ್ತಿವೆಯೋ ಎಂಬಂತೆ ಭಾಸವಾಗುವ ಮೈನ್ಸ್ ಲಾರಿಗಳು, ಪ್ರಯಾಣಿಸುವ ಪ್ರಯಾಣಿಕರಿಗೂ, ವಾಹನವನ್ನು ಚಲಾಯಿಸುವ ಚಾಲಕರಿಗೂ ಎದೆಯೊಳಗೆ ನಡುಕ ಹುಟ್ಟಿಸುತ್ತದೆ. ಹೊಟ್ಟೆ ಪಾಡಿಗಾಗಿ ದುಡಿಮೆ ಬೇಕೆಂದು ಡ್ರೈವರ್ ಹುದ್ದೆಗೆ ಸೇರಿಕೊಂಡಿರುತ್ತಾರೆ, ಒಂದು ದಿನವೋ, ಎರಡು ದಿನವೋ ಆದರೆ ಸರಿ ಎನ್ನಬಹುದು. ಆದರೆ ದಿನವೂ ಕೂಡ ಆ ಮಾರ್ಗದಲ್ಲಿ ಸಾಗುವಾಗ ಒಮ್ಮೆಗೆ ಎದುರಿನಿಂದ ಬರುವ ಗಾಡಿಗಳು ಯಮರಾಯನ ದರ್ಶನ ಮಾಡಿಸುವುದರಲ್ಲಿ ಯಾವ ಸಂದೇಹವೂ ಇಲ್ಲ. ಒಂದು ಪಕ್ಕದಲ್ಲಿ ಪರ್ವತದೋಪಾದಿಯಲ್ಲಿ ತಲೆ ಎತ್ತಿ ನಿಂತಿರುವ ಅರಣ್ಯ, ಇನ್ನೊಂದು ಪಕ್ಕದಲ್ಲಿ ಬೇಸಿಗೆಯಲ್ಲಿ ಶಾಂತ ಮೂರ್ತಿಯಾಗಿಯೂ, ಮಳೆಗಾಲದಲ್ಲಿ ರುದ್ರದೇವಿಯೂ ಆಗಿ ರೌದ್ರಾವತಾರವನ್ನು ಪ್ರದರ್ಶಿಸಿಕೊಂಡು ಹರಿಯುವ ತುಂಗಾ ನದಿಯೂ ಇದೆ. ಈ ಸಮಸ್ಯೆಗಳ ನಡುವೆ ಹೆಂಡತಿ, ಮನೆ, ಮಕ್ಕಳು ಸಂಸಾರದ ಚಿಂತೆಗಳೂ ಇರುತ್ತವೆ. ಈ ಮಧ್ಯೆ ಸಾವಿರಾರು ಜೀವಗಳನ್ನು ಹೊತ್ತೊಯ್ಯುವ ನೂರಾರು ಜೀವಗಳು, ಕುಟುಂಬದವರೂ ನನ್ನನ್ನು ನಂಬಿ ಬಸ್ಸು ಹತ್ತದ್ದಾರೆ ಎನ್ನುವ ಜವಬ್ಧಾರಿ ಒಂದೆಡೆಯಾದರೆ, ಅವರಿಂದ ನನಗೆ ನನ್ನ ಕುಟುಂಬಕ್ಕೆ ಊಟ ದೊರೆಯುತ್ತಿದೆ ಎನ್ನುವ ಋಣಭಾದೆ ಮತ್ತೊಂದೆಡೆಯಲ್ಲಿ. ಅದೇನೆ ಇರಲಿ, ತನ್ನೆಲ್ಲಾ ನೋವು ಸಂಕಟಗಳನ್ನು ಬದಿಗೊತ್ತಿ, ನಗುನಗುತ್ತ ನಮ್ಮೆಲ್ಲರನ್ನು ಅವರ ಬಸ್ಸಿನಲ್ಲಿ ಕರೆದುಕೊಂಡು ಹೋಗಿ ನಮ್ಮ ನಮ್ಮ ಊರುಗಳನ್ನು ಸುರಕ್ಷಿತವಾಗಿ ತಲುಪಲೂ ತಮ್ಮ ಸಹಾಯಹಸ್ತವನ್ನು ದೊಡ್ಡಮಟ್ಟದಲ್ಲಿ ನೀಡಿರುವ ಡ್ರೈವರ್ ಮಾಮನಿಗೆ ಮನದಾಳದಿಂದ ಹೇಳುವೆ ಥ್ಯಾಂಕ್ಯೂ……...............
ಸಹನಾ ಶೆಟ್ಟಿ
ವಿದ್ಯಾರ್ಥಿ ಶಿಕ್ಷಕಿ.
- Get link
- X
- Other Apps
Comments
Post a Comment