Education
“ಮಾಯಾದ ನೋವಿನಲ್ಲಿ ಮರೆಯಾದ ಕನಸ್ಸು”
- Get link
- X
- Other Apps
“ಮಾಯದ ನೋವಿನಲ್ಲಿ ಮರೆಯಾದ ಕನಸ್ಸು”
ನಾನು, ನನ್ನ ಜೀವನ, ನನ್ನ ಕನಸು
ಆ ಕನಸ್ಸನ್ನು ನನಸು ಮಾಡಲುಬೇಕಾದ ಪ್ರಯತ್ನಗಳು, ಆ ಪ್ರಯತ್ನಗಳಿಗೆ ದೊರೆಯಬೇಕಾದ ಪ್ರತಿಫಲಗಳು, ಆನಂತರ
ಮನೆಯವರ ಮುಖದಲ್ಲಿ ಕಾಣಬೇಕಾದ ಸಂತೋಷ, ಆನಂದ ಭಾಷ್ಪ, ಈ ಎಲ್ಲದರ ಬಗ್ಗೆ ಹುಚ್ಚಿಯಂತೆ ಕನಸು ಕಾಣುತ್ತಿದ್ದಳು.
ಆದರೆ ಬಾಳ ಪಯಣದಲ್ಲಿ ಪಯಣಿಸುವಾಗ ಎದುರಾಗುವ ಕಲ್ಲು, ಮುಳ್ಳು, ಏರು, ತಗ್ಗುಗಳನ್ನು ದಾಟಿ ಅಂದುಕೊಂಡದ್ದನ್ನು
ಸಾಧಿಸುವುದು ಸುಲಭದ ಮಾತಾಗಿರಲಿಲ್ಲ. ಪರ್ವತದಷ್ಟಿದ್ದ ಕನಸ್ಸು ಪಾದದಡಿಯಲ್ಲಿ ದೂಳಾಗಿ, ಚಿಂತೆಯ ಕಂತೆ
ಮಾತ್ರ ಮುಗಿಲೆತ್ತರಕ್ಕೆ ಬೆಳೆದು ನಿಂತಿತ್ತು. ಕುಂತರು, ನಿಂತರು ಪ್ರಶ್ನೆಗಳ ಪಟ್ಟಿಯೊಂದು ತಿಳಿಯಾದ
ಮನಸ್ಸನ್ನು ಕಲಕಿ ಬಿಡುತಿತ್ತು. ಹೌದಾ ಇದು ನಾನೇನಾ? ನನ್ನ ಜೀವನವೇನಾ? ಏನಿದು ನಡೆಯಬಾರದೆಲ್ಲಾ ನಡೆದು
ಹೋಯಿತಲ್ಲ. ಮುಂದೇನು? ಭವಿಷ್ಯವನ್ನು ನೆನೆಸಿಕೊಂಡರೆ ಭಯದ ಕರಿ ನೆರಳು ಮುಖದ ಮೇಲಿನ ಮಂದಹಾಸವನ್ನು
ಮರೆಯಾಗಿಸಿ ಬಿಡುತ್ತದೆ. ಏನಾದರು ಮಾಡಿಕೊಂಡು ಬಿಡಲೇ? ಎಲ್ಲಿಯಾದರೂ ಹೋಗಿ ಬಿಡಲೇ? ಎಂಬ ನಕಾರಾತ್ಮಕ
ಆಲೋಚನೆಗಳು, ಮತ್ತೆ ಜಾಗೃವಾಗುವ ಒಳಮನಸ್ಸು, ನಾನು ಏನಾದರು ಮಾಡಿಕೊಂಡರೆ, ನನ್ನನ್ನು ಕಳೆದುಕೊಂಡ
ನೋವಿನೊಂದಿಗೆ ಸಮಾಜವನ್ನು ಆ ಹಿರಿ ಜೀವಗಳು ಹೇಗೆ ತಾನೇ ಎದುರಿಸಿಯಾರು? ನನ್ನನ್ನು ಹೆತ್ತ ತಪ್ಪಿಗೆ
ಅವರು ಏನೆಲ್ಲಾ ಹೇಳಿಸಿಕೊಳ್ಳಬೇಕಾದೀತೋ? ಉಫ್,,,,, ಉಸಿರು ಬಿಗಿಹಿಡಿದಂತಾಗಿ ಕುಸಿದು ಕುಳಿತ್ತಿದ್ದಾಳೆ
ಹಿತಾ.
ಬಾಲ್ಯದಿಂದಲೂ ಭಿನ್ನ ರೀತಿಯಲ್ಲಿ ತನ್ನನ್ನು
ತಾನು ತಿದ್ದಿಕೊಂಡು ತೀಡಿಕೊಂಡು ಅತ್ಯುತ್ತಮವಾದುದೇನಾದರೂ ಸಾಧಿಸಬೇಕು ಎನ್ನುವ ಆಸೆ ಹಿತಾಳದ್ದು.
ಆದರೆ ಬಡತನ ಆಕೆಯ ಕನಸ್ಸು ಅದುಮಿಡಲು ಒಂದು ಕಾರಣವಾದರೆ, ಹೆಣ್ಣು ಎಂಬ ಹಣೆಪಟ್ಟಿ ತನ್ನ ಕನಸ್ಸು ಕನಸಾಗಿಯೇ
ಉಳಿಯಲು ಮತ್ತೊಂದು ಕಾರಣವಾಗಿತ್ತು. ಆದರೆ ಶಾಲಾ ಮತ್ತು ಸಮಾಜದ ಚಟುವಟಿಕೆಯಲ್ಲಿ ತನ್ನನ್ನು ತಾನು
ಬಹಳ ಬೇಗ ತೆರೆದುಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿ
ಬಿಡುತ್ತಿದ್ದಳು. ವಯಸ್ಸಿನ ಸಮಸ್ಯೆಯೋ, ಏನಾದರು ಮಾಡಿಯೇ ತೀರುತ್ತೇನೆಂಬ ಅತಿಯಾದ ಆತ್ಮವಿಶ್ವಾಸವೋ
ತಿಳಿಯದು. ಆಕೆಯ ಪ್ರತಿಭೆಯನ್ನು, ಬುದ್ದಿವಂತಿಕೆಯನ್ನು ಯಾರಾದರು ಸ್ವಲ್ಪ ಮೆಚ್ಚಿಕೊಂಡು ಪ್ರೋತ್ಸಾಹಿಸಿದರೆ,
ತನಗೆ ಗೊತ್ತಿಲ್ಲದಂತೆ ಅವರನ್ನು ಅನುಸರಿಸುತ್ತಿದ್ದಳು. ಅವರನ್ನು ದೇವರಂತೆ ಕಾಣುತ್ತಿದ್ದಳು. ಆದರೆ
ಈಕೆಗಿದ್ದ ಮುಗ್ಧತೆ ಈ ಬೆನ್ನು ತಟ್ಟಿ ಪ್ರೋತ್ಸಾಹಿಸುವುದರ ಹಿಂದಿದ್ದ ಋಣಾತ್ಮಕ ಉದ್ದೇಶ ಅರಿವಿಗೆ
ಬಾರದಂತೆ ಮಾಡಿಬಿಟ್ಟಿತ್ತು. ಅನುಮಾನವೆಂಬ ಪದದ ಅರ್ಥವಾಗಲಿ, ಅವಮಾನವೆಂಬ ಅನುಭವದ ನೋವಾಗಲಿ ಕಿಂಚಿತ್ತು
ಅರಿವು ಆಕೆಗಿರಲಿಲ್ಲ. ಕಾರಣ ಈಕೆ ಬೆಳೆದ ವಾತಾವರಣವೇ ಅಂತದ್ದು. ಸರಳತೆ, ಸಜ್ಜನಿಕೆ, ಸತ್ಯ, ಸಂಕೋಚದ
ಬಾವಿಯೊಳಗೆ, ನನ್ನವರು ಯಾರು ಅಲ್ಲ ಎನ್ನುವ , ಭಿನ್ನವಾದ ಪ್ರಪಂಚವನ್ನು
ಅರ್ಥಮಾಡಿಕೊಳ್ಳುವ ಸಮುದ್ರವೊಂದಿದೆ ಎಂಬುವುದನ್ನು ಅರ್ಥಮಾಡಿಕೊಳ್ಳದೆ ಹೋದಳು.
ಚಿಕ್ಕಂದಿನಿಂದಲು ಕಣ್ಣಿನಲ್ಲಿ ಹೆದುರಿಸಿಕೊಟ್ಟುಕೊಂಡಿದ್ದ
ಅಮ್ಮ, ಪ್ರೀತಿ ವಿಶ್ವಾಸದ ಗಂಧ ಗಾಳಿಯು ಗೊತ್ತಿಲ್ಲದೆ ಪುರುಷನೆಂಬ ದರ್ಪ ಮೆರೆಯುತ್ತಿದ್ದ ಅಪ್ಪ,
ಇವರ ಕನಸ್ಸಿಗೆ ವಿರುದ್ದವಾಗಿ ಜನಿಸಿದವಳು ಹಿತಾ. ಸದಾ ಚಟುವಟಿಕೆಯಿಂದ ಒಂದಲ್ಲ ಒಂದು ಕೆಲಸದಲ್ಲಿ
ತನ್ನನ್ನು ತಾನು ತೊಡಗಿಸಿಕೊಂಡು ಮುಂದೆ ಬರಲು ಸದಾ ಹಂಬಲಿಸುತ್ತಿದ್ದಳು. ಆದರೆ ಆಕೆ ಏನೇ ಮಾಡಹೋದರು,
ಮಾತಾಡಹೋದರು, ಅಮ್ಮನ ಕೆಂಗಣ್ಣಿನ ನೋಟ ಹೆದರಿ ಹಿಂದೆ ಸರಿಯುವಂತೆ ಮಾಡುತಿತ್ತು. ಆದರೆ ಕಾಲಚಕ್ರವು
ಉರುಳಿದಂತೆ ಬೇರೆ ಬೇರೆ ವಾತಾವರಣದಲ್ಲಿ ಬೆಳೆಯುತ್ತಿದ್ದಂತೆ, ಹೊರ ಪ್ರಪಂಚದ ಸಂಚಾರಕ್ಕೆ ತನ್ನನ್ನು
ತಾನು ಅರ್ಪಿಸಿಕೊಂಡಿದ್ದಳು, ಸರಿತಪ್ಪುಗಳ ವಿಮರ್ಶೆ ಮಾಡದೆ. ಆದರೆ ಮನೆಯ ಕಟ್ಟುನಿಟ್ಟಿನ ವಾತಾವರಣ
ಈಕೆ ತಾನು ಮಾಡುತ್ತಿರುವ ಸಕಲ ಕಾರ್ಯಗಳ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಬಹಳ ಮುಖ್ಯ ಕಾರಣವಾಗಿತ್ತು.
ಆದ್ದರಿಂದ ಯಾರೊಂದಿಗೂ ಏನನ್ನೂ ಹೇಳಿಕೊಳ್ಳದೇ ತನ್ನ ಚಟುವಟಿಕೆಗಳನ್ನು ಸರಾಗವಾಗಿ ಮುಂದುವರೆಸಿದ್ದಳು.
ಈ ಮುಂದುವರಿಕೆ ಧನಾತ್ಮಕವಾಗಿರುತ್ತಿದ್ದರೆ, ತಾನು ಕಂಡ ಕನಸ್ಸು ಬಹಳ ಬೇಗ ಯಶಸ್ವಿಯಾಗಿ, ಗೆಲುವಿನ
ತುತ್ತತುದಿಯನ್ನು ತಲುಪುತ್ತಿದ್ದಳು. ಆದರೆ “ಹುಚ್ಚುಕೋಡಿ ಮನಸ್ಸು, ಅದು ಹದಿನಾರರ ವಯಸ್ಸು” ಎಂಬ
ಮಾತಿನಂತೆ, ಮನಸ್ಸು ಧನಾತ್ಮಕ ವಿಚಾರಕ್ಕಿಂತ ಋಣಾತ್ಮಕ ವಿಚಾರಕ್ಕೆ, ಬಣ್ಣದ ಪ್ರಪಂಚಕ್ಕೆ ಮಾರು ಹೋಗುವುದೇ
ಹೆಚ್ಚು, ಬೆಳೆಯ ಬೇಕೆನ್ನುವ ಹಂಬಲ, ಹಠ, ಬಣ್ಣದ ದೊಡ್ಡ, ದೊಡ್ಡ ಮಾತುಗಾರಿಕೆಗೆ ಇನ್ನಿಲ್ಲದಂತೆ ಮಾರುಹೋಗಿ
ಕೊನೆಯಲ್ಲಿ ತನ್ನನ್ನು ಮಾರಿಕೊಂಡು ಬಿಟ್ಟಳು. ಸಹವಾಸದ ಸಂತೆಯಲ್ಲಿ ಜೀವನವನ್ನೌ ಚೌಕಾಸಿ ಮಾಡಿಸಿ ಖರಿದಿಸಿದವರು
ಅದೆಷ್ಟೋ ಮಂದಿ. ಇದು ಎಲ್ಲಿ ಹೋಗಿ ಮುಟ್ಟಬಹುದು, ನನ್ನ ಭವಿಷ್ಯದ ಕತೆಯೇನು? ನನ್ನ ಜೀವ ಜೀವನ ಅದು
ನನ್ನದು, ಇನ್ನೊಬ್ಬರ ಸ್ವತ್ತಲ್ಲ, ನಾನು ಮಾಡಬೇಕಾಗಿರುವ ಕೆಲಸಗಳು ಸಾಕಷ್ಟಿವೆ, ಈ ಯಾವ ಜವಬ್ದಾರಿಯ
ನೆನಪು ಕ್ಷಣಕಾಲ ಆಕೆಗೆ ಬಾರದೆ ಹೋಯಿತೆ? ರಂಗಸ್ಥಳದಲ್ಲಿ ಸಭ್ಯಸ್ಥಳೆಂಬ ವೇಷಧರಿಸಿ, ಚೌಕಿಯಲ್ಲಿ ವೇಷಮರೆತು
ಬೇರೆಯ ರೂಪದಲ್ಲಿಯೇ ಬೆಳೆದುಬಿಟ್ಟಳು. ತಾನು ಏನಾಗಬೇಕು ಎಂಬುವುದು ಆಕೆಯ ಕನಸ್ಸಾಗಿತ್ತೋ, ವಾಸ್ತವದಲ್ಲಿ
ಅಂದುಕೊಂಡಿದ್ದಕ್ಕಿಂತ ಭಿನ್ನವಾಗಿ ನಡೆದು ಹೋಯಿತು. ಆ ಕ್ಷಣಕ್ಕೆ ಎಲ್ಲವೂ ಚೆನ್ನ, ಎಲ್ಲವೂ ಸುಖಕರ,
ಯಾವುದೇ ಪ್ರೀತಿ ವಿಶ್ವಾಸವಾಗಲಿ, ವಸ್ತುವಾಗಲಿ, ಸಿಗುವ ಕಡೆ ಸಿಗದೆ ಹೋದರೆ ಸಿಗಬಹುದಾದ ಜಾಗವನ್ನು
ಅರಸಿಕೊಳ್ಳುವುದು ಸಹಜ. ಹಿತಾಳ ಬಾಳಲ್ಲಿ ಆದದ್ದು ಅದೆ. ಹರೆಯದ ಮನಸ್ಸು ಬಯಸುವ ಆತ್ಮೀಯತೆ ತಂದೆ ತಾಯಿಯಿಂದ
ಸಂಪೂರ್ಣವಾಗಿ ದೊರೆತಿದ್ದರೆ ಹಿತಾ ಈ ರೀತಿಯ ಹೆಜ್ಜೆ
ಇಡುವ ಪರಿಸ್ಥಿತಿ ಬರುತ್ತಿರಲಿಲ್ಲವೇನೋ? ಇಂದಿಗೂ ಜೀವಂತವಾಗಿರುವುದು ಹಿತಾಳ ದೇಹ ಮಾತ್ರವೇ ಹೊರತು
ಮನಸ್ಸಲ್ಲ. ಮರ್ಯಾದಸ್ತ ಕುಟುಂಬದಲ್ಲಿ ಮರೆಯಾದವಳು
ನಾನೊಬ್ಬಳೆ ಎಂಬುವುದು ಆಕೆಯ ಕೊರಗು. ತಪ್ಪು ಎಲ್ಲಿ ನಡೆಯಿತು ಎಂಬುವುದರ ಬಗ್ಗೆ ಇಂದು ಪೂರ್ಣವಾಗಿ
ತರ್ಕಿಸಬಲ್ಲಳು. ಸರಿ ತಪ್ಪುಗಳ ಕುರಿತು ವಿಮರ್ಶಿಸಬಲ್ಲಳು. ಆದರೆ ಮಿಂಚಿ ಹೋದ ಕಾಲಕ್ಕೆ ಚಿಂತಿಸಿ
ಫಲವಿಲ್ಲ ಎಂಬ ಮಾತಿನಂತೆ ಕಾಲಕಳೆದು ಹಲವು ವಸಂತಗಳೆ ಸಂದಿವೆ. ಇಂದು ತನ್ನೆಲ್ಲಾ ಲೌಕಿಕ ಸುಖವನ್ನು ಬಿಟ್ಟು ವಾಸ್ತವದ ಕುರಿತಾಗಿ ಯೋಚಿಸುತ್ತಿದ್ದಾಳೆ.
ಆದರೆ ಭೂತಕಾಲದಲ್ಲಿ ನಡೆದು ಹೋದ ಘಟನೆಗಳು ಈಕೆಯನ್ನು ಮತ್ತೆ ಮೇಲೇಳದಂತೆ ಮಾಡಿದೆ. ತನ್ನಕನಸ್ಸು ನನಸ್ಸು
ಮಾಡುವ ಕುರಿತಾಗಿ ಅನೇಕ ಬಾರಿ ಯೋಚಿಸುತ್ತಾಳೆ. ಒಮ್ಮೊಮ್ಮೆ ಮತ್ತೆ ಆ ಹಂಬಲ ಆಸೆ, ಆಕಾಂಕ್ಷೆ ಮತ್ತೆ ಜಾಗೃತಗೊಳ್ಳುತ್ತದೆ. ಆದರೆ
ಗುರಿಮುಟ್ಟಬೇಕಾದ ವಿಚಾರದ ಬಗೆಗೆ ನನಗೆ ಯಾರನ್ನಾದರೂ ಕೇಳಿ ಮಾಹಿತಿ ಪಡೆಯೋಣವೆಂದರೆ ಮತ್ತೇ ಯಾರಿಂದಲಾದರೂ
ಅನ್ಯಾಯಕ್ಕೆ ಒಳಗಾಗುವೆನೋ ಎಂಬ ಭಯ, ತಾನೊಂದು ಹೆಣ್ಣು ನನಗೂ ನನ್ನದೇ ಆದ ಆಸೆ ಕನಸುಗಳಿವೆ, ಇಷ್ಟಕಷ್ಟಗಳಿವೆ.
ವಿವಾಹವೆಂಬ ಭಾವನಾತ್ಮಕ ಪ್ರಪಂಚದಲ್ಲಿ ನಾನು ವಿಹರಿಸಬೇಕು ಎಂಬ ತುಡಿತವಿದೆ. ಆದರೆ ಹಿಂದಿನ ಘಟನೆಗಳು,
ಭವಿಷ್ಯಕ್ಕೆ ತೊಡಕಾಗಬಹುದು ಎಂಬ ಚಿಂತೆ. ಯಾವುದು ಬೇಡ ಸತ್ತು ಬಿಡೋಣವೆಂದೆನಿಸಿದರೆ ಹೆತ್ತವರನ್ನು
ಸಂಕಟದ ಕುಣಿಗೆ ತಳ್ಳಿ, ನನ್ನ ದಾರಿ ನಾನು ನೋಡಿಕೊಳ್ಳುವುದು ಎಷ್ಟು ಸರಿ ಎಂದು ಜಾಗೃತವಾಗುವ ಜವಾಬ್ದಾರಿ,
ಇಷ್ಟೆಲ್ಲಾ ನೋವುಗಳ ನಡುವೆಯು ಸರಿಹೋಗಬಹುದೇನೋ ಎನ್ನುವ ಸಣ್ಣ ಆತ್ಮವಿಶ್ವಾಸ, ಬಾರವಾದ ಹೆಜ್ಜೆಗಳನ್ನು
ಭಯದಿಂದಲೇ ಇಡುತ್ತಾ ಬದುಕು ಸಾಗಿಸುವ ಹಿತಾಳ ಕತೆಯಿದು. ಸದಾ ಸರ್ವರ ಹಿತವನ್ನು ಭಯಸುವ ಈಕೆಗೇಕೆ ಹಿತವಾದ
ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ???????.........
ಸಹನಾ
ಶೆಟ್ಟಿ.
ವಿದ್ಯಾರ್ಥಿ
ಶಿಕ್ಷಕಿ.
- Get link
- X
- Other Apps
Comments
Post a Comment