Education
ಎಲ್ಲಾ ಬಲ್ಲವರು ಯಾರು ಇಲ್ಲ
- Get link
- X
- Other Apps
‘ಎಲ್ಲವನ್ನು ಬಲ್ಲವರು ಯಾರು ಇಲ್ಲ’
ನಮಸ್ಕಾರ ಸ್ನೇಹಿತರೆ, “ನಾನು ಎಲ್ಲವನ್ನು ತಿಳಿದಿದ್ದೇನೆ. ನನಗೆ ಎಲ್ಲವೂ ಗೊತ್ತಿದೆ. ನನ್ನ ಜೀವನದಲ್ಲಿ ಇನ್ನು ಕಲಿಯಬೇಕಾದದ್ದು ಯಾವುದು ಇಲ್ಲ ಎಂದು ಬೀಗುವ ಮಹಾತ್ಮರಿಗೆ ನನ್ನ ಈ ಲೇಖನ ಅರ್ಪಣೆ.
ಆಸಕ್ತಿ ಎಂಬ ವಿಚಾರ ಬಂದಾಗ ನಮ್ಮ ಆಸಕ್ತಿಯ ಕ್ಷೇತ್ರಗಳು ಹಲವಾರು. ಅದು ಕಲೆ ಇರಬಹುದು, ವಿಜ್ಞಾನ ಇರಬಹುದು, ಸಾಹಿತ್ಯ ಇರಬಹುದು. ಇವುಗಳಲ್ಲಿ ನಾವು ಮೆಚ್ಚುವ ಅಂಶಗಳು ಕೆಲವು ಮಾತ್ರ. ಕೆಲವರು ವಿಜ್ಞಾನ ಇಷ್ಟಪಟ್ಟರೆ ಇನ್ನು ಕೆಲವರು ಸಮಾಜ ವಿಜ್ಞಾನವನ್ನು ಇಷ್ಟಪಡಬಹುದು. ಕೆಲವರು ಇತಿಹಾಸವನ್ನು ಪ್ರೀತಿಸಿದರೆ, ಕೆಲವರು ಭೂಗೋಳವನ್ನು ಹೆಚ್ಚಾಗಿ ಪ್ರೀತಿಸುತ್ತಾರೆ. ಸಮಾಜ ವಿಜ್ಞಾನ ಪ್ರೀತಿಸುವವರಿಗೆ ಸಮಾಜ ವಿಜ್ಞಾನದ ಎಲ್ಲಾ ವಿಚಾರಗಳು ಇಷ್ಟವಾಗಬೇಕೆಂದೇನು ಇಲ್ಲವಲ್ಲ. ಇದು ಒಂದು ವಿಚಾರ. ನಾವು ಒಂದು ಕ್ಷೇತ್ರದ ಬಗೆಗೆ ಆಸಕ್ತಿ ಹೊಂದಿದ್ದೇವೆ ಎಂದರೆ ಆ ವಿಷಯದಲ್ಲಿ ನಾವು ವಿದ್ವಾಂಸರಾಗಿರಬೇಕೆಂದೇನು ಇಲ್ಲವಲ್ಲ. ಹಾಗಂತ ವಿದ್ವಾಂಸರಾಗಬಾರದು ಎಂಬುದು ನನ್ನ ಮಾತಿನ ಅರ್ಥವಲ್ಲ. ವಿದ್ವಾಂಸರಾಗಬೇಕು ಎನ್ನುವ ಹಂಬಲ ಎಲ್ಲರಲ್ಲಿಯು ಇರುವ ಮಹದಾಸೆ. ಬೆಳೆಯುವ ಪೈರುಗಳನ್ನು ಬೆಳೆಯಲು ಬಿಡಬೇಕು. ಆ ಬೆಳೆಯುವ ಪೈರು ಉತ್ತಮ ರೀತಿಯಲ್ಲಿ ಬೆಳವಣಿ ಗೆ ಹೊಂದಬೇಕೆಂದರೆ ಬೆಳವಣಿ ಗೆಗೆ ಬೇಕಾದ ಪೌಷ್ಠಿಕಾಂಶಗಳನ್ನು ನಾವು ನೀಡಬೇಕಾಗುತ್ತದೆ. ಹಾಗೆಯೇ ವಿದ್ವಾಂಸರಾಗಬೇಕೆನ್ನುವ ಆಸೆ ಇರುವವರು ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಪ್ರಯತ್ನಮಾಡಬೇಕು, ಈ ಪ್ರಯತ್ನಕ್ಕೆ ಬೇಕಾದ ಸಕಲ ಮಾಹಿತಿಗಳನ್ನು ನಾವು ಈಗಾಗಲೆ ತಿಳಿದಿರುವ ಕೆಲವರಲ್ಲಿ ಮಾಹಿತಿಯನ್ನು ಪಡೆದುಕೊಂಡು ನಮ್ಮ ಕನಸುಗಳನ್ನು ನನಸು ಮಾಡಲು ಪ್ರಯತ್ನಿಸಬೇಕು. ಆದರೆ ಕಾಯುವವರೆ ಕೊಲ್ಲುವವರಾದರೆ? ಬೇಲಿಯೆ ಎದ್ದು ಹೊಲ ಮೆದ್ದರೆ, ಕೇಳುವುದನ್ನು ಯಾರನ್ನು?? ಮಾರ್ಗದರ್ಶಕರೆ ಸರಿ ಇಲ್ಲದಾದಾಗ, ಮಾರ್ಗದರ್ಶಕರೆ ಇಲ್ಲಸಲ್ಲದ ವಿಚಾರದಲ್ಲೊ, ಅಥವಾ ನಡತೆಯಲ್ಲೊ, ಗುಣದಲ್ಲೊ ದುರ್ವತನೆ ತೋರುವುದು, ಚುಚ್ಚು ಮಾತಿನಿಂದ ಬೈಯುವುದು ಮಾಡಿದರೆ ಪ್ರತೆಭೆ ಎಲ್ಲಿಂದ ಬೆಳೆಯಬೇಕು?? ಇದು ಕಲಿಸುವ ಪರಿಯೇ??
ವಿದ್ವಾಂಸರಾದವರು ಅಥವಾ ಕಲಿತವರು ತಾವು ತಿಳಿದ ವಿಚಾರಗಳನ್ನು ತಿಳಿಯಲಿಚ್ಚಿಸುವವರಿಗ ಸೂಕ್ಷ್ಮವಾಗಿ ತಿಳಿಹೇಳಬೇಕು. ಅಗ ಆ ಮಾರ್ಗದರ್ಶಕರಿಗು ಒಂದು ಬೆಲೆ. ಕಲಿಯಲಿಚ್ಚಿಸುವ ವಿದ್ಯಾರ್ಥಿಗಲಿಗು ಕೂಡ ಕಲಿಕೆಯಲ್ಲಿ ಆಸಕ್ತಿ ಮೂಡುತ್ತದೆ. ಈ ವಿಚಾರವಾಗಿ ಯೋಚಿಸುತ್ತ ಕುಳಿತ ನನಗೆ ಒಂದು ನೈಜ ಘಟನೆ ನೆನಪಾಯಿತು.
ಶ್ರೇಯ ಪ್ರತಿಭಾವಂತ ಹುಡುಗಿ. ಈ ವಿದ್ಯಾರ್ಥಿನಿ ಕಲಿಕೆಯಲ್ಲಿ ತುಂಬ ಮುಂದಿದ್ದಳು. ಅದರಲ್ಲೂ ಇತಿಹಾಸ ಎಂದರೆ ಎಲ್ಲಿಲ್ಲದ ಪ್ರಾಣ. ಇತಿಹಾಸದ ಬಗ್ಗೆ ಹೇಳಲು ಬಿಟ್ಟರೆ ದಿನವಿಡಿ ಮಾತನಾಡಬಲ್ಲ ಚಾಕಚಕ್ಯತೆ ಉಳ್ಳವಳು. ಇತಿಹಾಸದ ಬಗ್ಗೆ ತಿಳಿದುಕೊಳ್ಳುವುದರಲ್ಲಿಯು ಕೂಡ ತುಂಬಾ ಆಸಕ್ತಿ. ಒಮ್ಮೆ ಕಾಲೇಜಿನಲ್ಲಿ ಇತಿಹಾಸ ಪಾರಂಪರಿಕ ಕೂಟದ ವತಿಯಿಂದ ಸಮೀಪದಲ್ಲಿದ್ದ ಪಾಳು ಬಿದ್ದ ಜೈನ ಬಸದಿಗೆ ಬೇಟಿ ನೀಡಿದ್ದರು. ಎಲ್ಲರು ಆ ಜೈನ ಬಸದಿಯನ್ನು ನೋಡಿ ನಾಲ್ಕು ಸೆಲ್ಫೀ ಕ್ಲಿಕ್ಕಿಸಿಕೊಂಡು ಖುಷಿಯಿಂದ ವಾಪಾಸಾದರು. ಆದರೆ ಶ್ರೇಯ ಮಾತ್ರ ಅಷ್ಟಕ್ಕೆ ಸುಮ್ಮನಾಗಲ್ಲಿಲ್ಲ. ಆ ಜೈನ ಬಸದಿಯ ಬಗೆಗೆ ಗೊತ್ತಿರುವ ಆ ಊರಿನ ಮುಖಂಡರನ್ನು ಭೇಟಿಯಾಗಿ ಅದರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಲೇಖನ ಬರೆದಿದ್ದಳು. ಇದು ಅವಳು ಇತಿಹಾಸದ ಬಗೆಗಿನ ಆಸಕ್ತಿಯನ್ನು ಪ್ರದರ್ಶಿಸುತ್ತದೆ. ಆದರೆ ಇತಿಹಾಸದ ಸಾಮಾನ್ಯವಾಗಿ ಎದುರಿಸುವ ಸಮಸ್ಯೆಗಳೆಂದರೆ ಇಸವಿಗಳು. ಇಂತದ್ದೇ ಸಮಸ್ಯೆಯನ್ನು ಶ್ರೇಯ ಕೂಡ ಎದುರಿಸುತ್ತಿದ್ದಳು. ಇತಿಹಾಸ ಪರೀಕ್ಷೆಯಲ್ಲಿ ಕಡಿಮೆ ಅಂಕಗಳೇನಾದರು ಬಂದಿದ್ದರೆ ಅದು ಇಸವಿಯಲ್ಲಿ ಮಾತ್ರ ಆಗಿರುತ್ತಿತ್ತು. ಆದರೆ ಈ ಇಸವಿ ಅವಳಿಗೆ ದೊಡ್ಡ ಅವಮಾನ ಮಾಡುತ್ತದೆಂದು ಅವಳು ಭಾವಿಸಿರಲಿಲ್ಲ.
ಅದೊಂದು ದಿನ ಇತಿಹಾಸದ ಗುರುಗಳೊಬ್ಬರು ತರಗತಿಯಲ್ಲಿ ಪಾಠ ಮಾಡುವಾಗ ಶ್ರೇಯಳನ್ನು ಎಬ್ಬಿಸಿ “ಬಹಮನಿ ಸಾಮ್ರಾಜ್ಯ ಸ್ಥಾಪನೆಯಾದ ವರ್ಷವನ್ನು ಕೇಳಿದರಂತೆ”, ಕಲಿತ ಎಷ್ಟೋ ದಿನಗಳ ನಂತರ ಆ ಪ್ರಶ್ನೆಯನ್ನು ಒಮ್ಮೆಲೆ ಕೇಳಿದ್ದರಿಂದ ಆಕೆ ಕಸಿವಿಸಿಗೊಂಡು ಉತ್ತರ ಹೇಳಲು ಅಸಮರ್ಥಳಾದಳು. ಉತ್ತರ ಯಾರಿಗೆ ಗೊತ್ತಿದೆ ಎಂದು ಕೇಳಬಹುದಾಗಿತ್ತು? ಅಥವಾ ಅವರೆ ಹೇಳಬಹುದಾಗಿತ್ತು. ಅದು ಬಿಟ್ಟು, ನಿನಗೆ ಇತಿಹಾಸ ಎಂದರೆ ಪ್ರಾಣ ಅಲ್ಲವೆ? ನೀನು ಇತಿಹಾಸವನ್ನು ರಚಿಸುವ ಪಿಂಡ ಅಲ್ಲವೇ? ಒಂದು ಚಿಕ್ಕ ಪ್ರಶ್ನೆಗೆ ಉತ್ತರ ಹೇಳಲು ಗೊತ್ತಿಲ್ಲ, ಅದೇನು ಇತಿಹಾಸದ ಮೇಲೆ ಪ್ರೀತಿ,ಭಕ್ತಿ, ನಾಚಿಕೆ ಆಗಬೇಕು ನಿನಗೆ ಎಲ್ಲಾದರು ದನ ಕಾಯೋಕೆ ಹೋಗು ಎಂದು ವ್ಯಂಗವಾಡಿದರಂತೆ. ಅದೇನೆ ಇರಲಿ ಇಷ್ಟು ಆಸಕ್ತಿಯಿರುವ ವಿದ್ಯಾರ್ಥಿನಿಗೆ ಆಕೆಯ ಗುರುಗಳೊಬ್ಬರು ಈ ರೀತಿ ವ್ಯಂಗವಾಡಿ ಮನನೋಯಿಸಿದ್ದು ಎಷ್ಟು ಸರಿ?? ಒಂದು ವೇಳೆ ಗೊತ್ತಿಲ್ಲದಾದರೆ ಅವರಿಗೆ ಸುಳಿವು ನೀಡಿ ಉತ್ತರ ಹೇಳಿಸುವುದೋ ಅಥವಾ ಅವರೆ ಉತ್ತರ ಹೇಳುವುದೋ ಮಾಡಬಹುದಾಗಿತ್ತು. ಅದನ್ನು ಬಿಟ್ಟು ಮನನೋಯಿಸುವಂತೆ ಆಡಿದ ಮಾತನಾಡಿದ್ದು ಸರಿಯಲ್ಲ.
ಒಮ್ಮೆ ಯೋಚಿಸಿ ಸ್ನೇಹಿತರೆ, ಇನ್ನು ಬೆಳೆಯುತ್ತಿರುವ ಕುಡಿಗಳು ನಾವು. ಈ ಸಮಯದಲ್ಲಿ ತಪ್ಪುಗಳಾದರೆ, ತಿದ್ದಿ ಬುದ್ದಿ ಹೇಳಬೇಕಾದವರು ಈ ರೀತಿ ಮೂದಲಿಸಿದರೆ ಕಲಿಕೆಯಲ್ಲಿ ಆಸಕ್ತಿ ಇರುವ ಕೆಲವು ವಿದ್ಯಾರ್ಥಿಗಳು ಏನನ್ನು ಕಲಿಯದೇ ನಮ್ಮ ಕೈಲೇನು ಆಗುವುದಿಲ್ಲ ಎಂಬ ನಿರ್ಧಾರಕ್ಕೆ ಬಂದು ಬಿಡುತ್ತಾರೆ. ಆಸಕ್ತಿ ಇರುವ ವಿದ್ಯಾರ್ಥಿಗಳ ಮನಸ್ಸನ್ನು ಅರ್ಥೈಸಿಕೊಂಡು ಅವರಿಗೆ ಪ್ರೋತ್ಸಾಹಿಸುವ ಮನಸ್ಥಿತಿ ನಮ್ಮದಾಗಬೇಕು. ಇಲ್ಲವೆ ಸುಮ್ಮನ್ನಿದ್ದು ಬಿಡಬೇಕು. ಅದುಬಿಟ್ಟು ಈ ರೀತಿ ಚುಚ್ಚು ಮಾತನಾಡಿ ಬೆಳೆಯುವ ಪೈರನ್ನು ಮೊಳಕೆಯಿರುವಾಗಲೇ ಚಿವುಟಿ ಹಾಕಬಾರದು. ಕಲಿಯುವುದು ಸಾಯುವವರೆಗೂ ಇರುತ್ತದೆ, ಎಲ್ಲವನ್ನು ಬಲ್ಲವರು ಯಾರು ಇಲ್ಲ. ಕಲಿಯದ ವಿಚಾರಗಳನ್ನು ಕಲಿಯುತ್ತ, ಕಲಿತ ವಿಚಾರಗಳನ್ನು ಕಲಿಸುತ್ತ ನಾವೆಲ್ಲರು ಉಜ್ವಲ ಭವಿಷ್ಯದ ದಾಪುಗಾಲಿಡೋಣ.
********
- Get link
- X
- Other Apps
Comments
Post a Comment