Education
ಚೊಚ್ಚಲ ತಾಯ್ತನ.
- Get link
- X
- Other Apps
"ಹೆಲ್ತ್ ಕೇರ್ ಗೆ ಬಂದಾಗ ಯಾರು ಈ ರೀತಿ ನೋಡಿಕೊಂಡಿರಲಿಲ್ಲ ಮಿಸ್. ನಿಮ್ಮ ಆರೈಕೆ ನನಗೆ ನನ್ನ ತಾಯಿಯ ನೆನಪು ಥರುತ್ತಿದೆ. ತುಂಬಾ ಥ್ಯಾಂಕ್ಸ್ ಮಿಸ್. ನೀವು ಇರೋದಕ್ಕೆ ಹೆಲ್ತ್ ಕೇರ್ ಗೆ ಬಂದೆ ಮಿಸ್. ಇಲ್ಲದಿದ್ದರೆ ತುಂಬಾ ಭಯ ಆಗ್ತಿತ್ತು". ಈ ಮಾತುಗಳು ನನ್ನ ಕಣ್ಣಂಚಿನಲ್ಲಿ ನೀರು ಬಂದು, ಒಂದೆರಡು ಹನಿಗಳು ನನ್ನ ಕೆನ್ನೆಯನ್ನು ತೋಯಿಸಿತ್ತು.
ಚೊಚ್ಚಲ ತಾಯ್ತನ ಎಂದಾಗ ಯಾವುದೋ ಹೆಣ್ಣು ಮಗಳು ತಾನು ಮೊದಲು ತಾಯಿಯಾಗುತ್ತಿರುವ ಸಂತೋಷದ ವಿಚಾರವನ್ನು ಹಂಚಿಕೊಳ್ಳುತ್ತಿರಬಹುದೇನೋ,, ಎಂದು ಮೇಲ್ನೋಟಕ್ಕೆ ಅನ್ನಿಸುವುದು ಸಹಜ. ಇಲ್ಲ ,, ನಾನು ಮೊದಲು ತಾಯಿಯಾಗುವ ಮೊದಲು, ಹಲವು ಮಕ್ಕಳ ಮನಸ್ಸಿನಲ್ಲಿ ತಾಯಿಯ ಸ್ಥಾನವನ್ನು ಪಡೆದಿದ್ದೆ. ಆಸಂತೋಷದ ಸವಿನೆನಪನ್ನೂ ಬರಹ ರೂಪಕ್ಕಿಳಿಸಲು ಬಹಳ ಸಂತೋಷವಾಗುತ್ತಿದೆ. ಎರಡು ವರ್ಷಗಳ ಬಿ.ಎಡ್ ತರಬೇತಿಯನ್ನು ಮುಗಿಸಿ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡೆ. ಶಿಕ್ಷಕಿಯಾಗಿ ಹೋದ ನನಗೆ ನಿರೀಕ್ಷೆಗೂ ಮೀರಿದ ಜವಬ್ದಾರಿಯೊಂದು ನನ್ನ ನಿಯಂತ್ರಣಕ್ಕೆ ಬಂದಿತ್ತು. ಅದೇನೆಂದರೆ ಮಕ್ಕಳಲ್ಲಿ ಯಾವುದಾದರೂ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ಅವರ ಆರೈಕೆ ಮಾಡುವುದು. ಅವರ ಊಟ, ಔಷಧ, ಉಪಚಾರಗಳನ್ನು ನೋಡಿಕೊಳ್ಳುವುದು, ಅವರ ಆರೋಗ್ಯದಲ್ಲಿ ಆಗುವ ಏರುಪೇರು ಹಾಗೂ ಸುಧಾರಣೆ ಗಳ ಬಗ್ಗೆ ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ತಿಳಿಸುವುದು. ಆರಂಭದಲ್ಲಿ ಆ ಕೆಲಸ ನನಗೆ ಬಹಳ ಬೇಸರ ತಂದಿತ್ತು. ತರಗತಿಯಲ್ಲಿ ಮಕ್ಕಳೊಂದಿಗೆ ಪಾಠಮಾಡಿಕ್ಂಡಿರಬೇಕೆಂಬ ಮುಗಿಲೆತ್ತರದ ಕನಸ್ಸಿನೊಂದಿಗೆ ಬಂದ ನನಗೆ ಇದೆಂಥ ಶಿಕ್ಷೆ. ಛೇ ಇದಕ್ಕೇನಾ ನಾನು ಬಿ.ಎಡ್ ಮಾಡಿದ್ದು? ಈ ಕೆಲಸ ಮಾಡುವುದಾದರೆ ಯಾವುದಾದರೂ ಹಾಸ್ಪಿಟಲ್ ಗೆ ಸೇರಿಕೊಳ್ಳಬಹುದಿತ್ತಲ್ಲ?? ಎಂದು ನಾನ ತರಹದ ಪ್ರಶ್ನೆಗಳು ನನ್ನ ತಲೆಯನ್ನು ಆವರಿಸಿತ್ತು. ಹೊಸ ಶಾಲೆ, ಹೊಸ ಮಕ್ಕಳು, ಹೊಸ ಅನುಭವ , ವೃತ್ತಿ ಜೀವನದ ಆರಂಭದ ಅನುಭವ ಈ ಮಟ್ಟದ್ದಾಗಿರುತ್ತದೆಂದು ಭಾವಿಸಿರಲಿಲ್ಲ. ಅದ್ಯಾಕೋ ಈ ಕೆಲಸ ಬಹಳ ಬೇಸರವಾಗಿತ್ತು. ಈ ನಡುವೆ ಜ್ವರ ಹೆಚ್ಚಿರುವ ವಿದ್ಯಾರ್ಥಿಗಳೊಂದಿಗೆ ಹೆಚ್ಚಾಗಿ ಇರುತ್ತಿದುದರ ಪರಿಣಾಮ ಸೋಂಕು ನನಗೂ ತಗುಲಿದಂತಾಗಿ ಆರೋಗ್ಯ ವಿಪರೀತ ವಾಗಿ ಹದಗೆಟ್ಟಿತ್ತು. ಯಾವುದೇ ಮಾತ್ರೆ , ಔಷಧಿ ತೆಗೆದುಕೊಂಡರೂ ಆರೋಗ್ಯ ಸರಿಯಾಗಲೊಲ್ಲದು. ಕೆಲಸ ಹೋದರೆ ಹೋಗಲಿ ಎಂದು ನಿರ್ಧರಿಸಿ ಮನೆಗೆ ಬಂದೆ. ಆ ಹೊತ್ತಿಗೆ ಜಗತ್ತನ್ನೆಲ್ಲ ಆವರಿಸಿದ್ದ ಕೊವಿಡ್ ಎಂಬ ಕಾರ್ಮೋಡ, ಶಾಲಾ ಕಾಲೇಜು ಗಳನ್ನು ಮುಚ್ಚಬೇಕೆಂದು ಬಂದ ಸರ್ಕಾರ ದ ಆಜ್ಞೆ, ಎಲ್ಲವೂ ನನ್ನ ಪಾಲಿಗೆ ಒಂದು ರೀತಿಯ ವರದಾನವಾಗಿತ್ತು. ಇಷ್ಟವಿಲ್ಲದ ಕೆಲಸ ದಿಂದ ಪಾರಾದೆ ಎನ್ನುವ ಸಮಾಧಾನವು ನನ್ನದಾಗಿತ್ತು.
ಅದಾದ ಎರಡು ತಿಂಗಳಿಗೆ ಆನ್ಲೈನ್ ತರಗತಿಗಳು ಆರಂಭಗೊಂಡಿದ್ದವು. ಮೂರು ತಿಂಗಳುಗಳ ಕಾಲ ಆನ್ಲೈನ್ ತರಗತಿಗಳು ನಡೆದ ಬಳಿಕ, ಔಪಚಾರಿಕ ಶಿಕ್ಷಣ ವ್ಯವಸ್ಥೆಯಲ್ಲಿ ಕರ್ತವ್ಯ ನಿರ್ವಹಿಸಲು ಸರ್ಕಾರ ದಿಂದ ಅನುಮತಿ ದೊರೆತಿತ್ತು. ಮಕ್ಕಳನ್ನು ನೇರವಾಗಿ ಸಂದರ್ಶಿಸಿ,.ಪಾಠಮಾಡುವ ಮೂಲಕ ಸಾಕಷ್ಟು ವಿದ್ಯಾರ್ಥಿ ಬಳಗವನ್ನು ಸಂಪಾದಿಸಿದೆ. ಶಿಕ್ಷಕಿ ಹಾಗೂ ವಿದ್ಯಾರ್ಥಿಗಳ ನಡುವೆ ಭಾವನಾತ್ಮಕವಾದ ಬಾಂಧವ್ಯ ಏರ್ಪಟ್ಟು ಒಂದು ಸ್ನೇಹಮಯ ವಾತಾವರಣ ಸೃಷ್ಟಿಯಾಗಿತ್ತು. ಈ ನಡುವೆ ಮತ್ತೆ ವಿದ್ಯಾರ್ಥಿಗಳಲ್ಲಿ ಕೆಲವರಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಆ ಸಂದರ್ಭದಲ್ಲಿ ಆ ಮಕ್ಕಳ ಆರೋಗ್ಯದ ಜವಾಬ್ದಾರಿ ಮತ್ತೆ ನನ್ನ ಹೆಗಲೇರಿತ್ತು. ಅದೇನೋ ನನಗರಿಯದೆ ನಾನು ಆ ಮಕ್ಕಳನ್ನು ನನ್ನ ಮಕ್ಕಳಂತೆ ಆರೈಕೆ ಮಾಡಿದೆ. ಅವರ ತಟ್ಟೆ ತೊಳೆಯುವುದರಿಂದ ಹಿಡಿದು, ಅವರಿಗೆ ಸಮಯಕ್ಕೆ ಊಟ , ತಿಂಡಿ, ಮಾತ್ರೆ, ಔಷಧಿ ಇತ್ಯಾದಿಗಳನ್ನು ಸರಿಯಾಗಿ ಕೊಡುವುದು, ಸಮಯ ಸಮಯಕ್ಕೆ ಅವರ ಆರೋಗ್ಯ ಸುಧಾರಿಸಿದೆಯೇ ಎಂದು ಪರೀಕ್ಷಿಸುವುದು, ಇವೆಲ್ಲವನ್ನು ಮುತುವರ್ಜಿ ಯಿಂದ ಮಾಡುತ್ತಿದ್ದೆ. ಇದೇ ಸಂದರ್ಭದಲ್ಲಿ ನಿರೀಕ್ಷಿಸದ ಪ್ರತಿಕ್ರಿಯೆಯೊಂದು ವಿದ್ಯಾರ್ಥಿಗಳ ಹೃದಯಾಂತರಾಳದಿಂದ ಹೊರಹೊಮ್ಮಿತ್ತು. ಅದೇನೆಂದರೆ "ನೀವು ಮಾಡುತ್ತಿರುವ ಆರೈಕೆ ನನಗೆ ನನ್ನ ತಾಯಿಯ ನೆನಪು ತರುತ್ತಿದೆ. ನನ್ನ ಅಮ್ಮನ ಹಾಗೆ ಆರೈಕೆ ಮಾಡುತ್ತೀರಿ. ಹೆಲ್ತ್ ಕೇರ್ ಗೆ ಬರ್ಲಿಕೆ ಅಂಜಿಕೆ ಆಗ್ತಿತ್ತು,, ಆದರೆ ಈಗ ಭಯ ಆಗ್ತ ಇಲ್ಲ,, ತುಂಬಾ ಥ್ಯಾಂಕ್ಸ್ ಮಿಸ್". ಎಂದು . ಆ ದಿನ ನನಗೆ, ಹೆಣ್ಣಿನ ಜನ್ಮ ಸಾರ್ಥಕತೆ ಪಡೆಯುವುದು ಆಕೆ ತಾಯಿಯಾದ ಸಂದರ್ಭದಲ್ಲಿ,, ಆದರೆ ನನ್ನ ಜನ್ಮ ಇಂದಿಗೆ ಸಾರ್ಥಕವಾಯಿತು ಎನ್ನುವಷ್ಟು ಸಂತೋಷವಾಗಿತ್ತು. ಕಲಾವಿದನಿಗೆ ಅಭಿಮಾನಿಗಳು ಹೇಗೋ , ಶಿಕ್ಷಕನಿಗೆ ವಿದ್ಯಾರ್ಥಿಗಳು ಹಾಗೆ. "ನಿಮಿಗೆ ನಮ್ಮಂತಹ ವಿದ್ಯಾರ್ಥಿಗಳು ಸಾವಿರ ಜನ ಸಿಗಬಹುದು ಮಿಸ್. ಆದರೆ ನಮಗೆ ನಿಮ್ಮಂತಹ ಟೀಚರ್ಸ್ ಸಿಗಲ್ಲ, ನಮ್ಮನ್ನು ಬಿಟ್ಟು ಎಲ್ಲೂ ಹೋಗಬೇಡಿ ಮಿಸ್" ಎಂಬ ಮಕ್ಕಳ ಪ್ರೀತಿಯ ನುಡಿ, ನಾಲ್ಕು ಮಕ್ಕಳ ಮುಖದಲ್ಲಿ ಭಯದ ಕರಿನೆರಳು ಮಾಯವಾಗಿಸಿ ನಗು ತರಿಸುವ ಮೂಲಕ ವೃತ್ತಿ ಜೀವನದ ಸಾರ್ಥಕತೆಯನ್ನು ಕಂಡುಕೊಂಡೆ ಎಂಬ ನೆಮ್ಮದಿ ನನ್ನ ಪಾಲಿನದು.
ಅದೆಷ್ಟು ಜನರಿಗೆ ಸಿಗುತ್ತದೆ, ತನ್ನ ಮಕ್ಕಳ ಆರೈಕೆಗೂ ಮುನ್ನ, ನಾಲ್ಕು ಮಕ್ಕಳ ಸೇವೆ ಮಾಡುವ ಸೌಭಾಗ್ಯ?? ನೂರು ದೇವರನ್ನು ಪೂಜಿಸಿದ ಫಲ, ನಾಲ್ಕು ಮಕ್ಕಳ ಸೇವೆಯಲ್ಲಿ ಫಲಿಸಿಕೊಂಡೆ. ಶಾಲೆಯೆಂಬ ದೇಗುಲಕ್ಕೆ, ವಿದ್ಯಾರ್ಥಿಗಳೇ ದೇವರು. ಆ ದೇವರ ಕೆಲಸವನ್ನು ಸಂತೋಷದಿಂದ ನೇರವೇರಿಸಿದ್ದೇನೆ ಎಂಬ ಸಂತೃಪ್ತಿ ನನಗಿದೆ. ಗೆಳತನದ ವಿಶಾಲ ಅರ್ಥವನ್ನು ವಿದ್ಯಾರ್ಥಿಗಳ ಒಡನಾಟದಲ್ಲಿ ಅರಿತುಕೊಂಡೆ. ಮಕ್ಕಳ ಉಡಿ ತುಂಬಿದ ಪ್ರೀತಿ , ಮಧುರ ಬಾಂಧವ್ಯ, ಸ್ನೇಹ-ಪ್ರೀತಿಯ ಕೊಡುಕೊಳ್ಳುವಿಕೆ, ಆತ್ಮೀಯತೆಯ ಆಲಿಂಗನ, ಆತ್ಮವಿಶ್ವಾಸದ ದಿಟ್ಟತನ ಈ ಎಲ್ಲವೂ ಗಟ್ಟಿಯಾದದ್ದು ತರಗತಿ ಎಂಬ ನಾಲ್ಕು ಕೋಣೆಯೊಳಗೆ. ತಾಯಿಯಾಗಿ, ಗೆಳತಿಯಾಗಿ, ಶಿಕ್ಷಕಿಯಾಗಿ ಸೇವೆ ಮಾಡಲು ಅವಕಾಶ ಕರುಣಿಸಿದ ದೇವರಿಗೆ ಹೇಳುವೆ ಪ್ರೀತಿಯ ಧನ್ಯವಾದ....
- Get link
- X
- Other Apps
Comments
ನಿಜ, ನಿಮ್ಮ ಮಾತು ನೂರಕ್ಕೆ ನೂರು ಸತ್ಯ.
ReplyDeleteಗುರುವಾದವನು ತಂದೆ-ತಾಯಿಗೆ ಸಮವೆನ್ನುವುದು ಇದೇ ಅರ್ಥದಲ್ಲಿ ತಾನೇ?
ಮಗುವಿಗೆ ಸೂಕ್ತ ವಿದ್ಯೆ-ಬುದ್ದಿಯ ಜೊತೆಗೆ ಅವರ ನಡತೆ-ವ್ಯಕ್ತಿತ್ವ ರೂಪಿಸುವ ಪೋಷಣೆಯ ಜವಾಬ್ದಾರಿಯು ಇದೆ. ಅದರೊಡನೆ ಅವರ ರಕ್ಷಣೆ, ಹಕ್ಕು- ಕರ್ತವ್ಯ ಎಲ್ಲದರ ನೋಡಿಕೊಳ್ಳುವ ಗುಣವೂ ಇದೆ.
ಪಾಠ ಮುಗಿಸಿ ಸುಮ್ಮನಾಗುವವರಿಗಿಂತ ನೀವು ಉನ್ನತ ಸ್ಥಾನದಲ್ಲಿದ್ದೀರಿ...
👌👌
ReplyDeleteGood job, keep it up
ReplyDelete